ಸಂದೇಶ

ಶ್ರೀ ಕೋಗುಂಡಿ ಬಕ್ಕೇಶಪ್ಪ,
ಅಧ್ಯಕ್ಷರು,
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ.,
ದಾವಣಗೆರೆ.

ಮಾನ್ಯ ಸಹಕಾರಿ ಬಂಧುಗಳೇ,
2023-24 ನೇ ಸಾಲಿನ ಬ್ಯಾಂಕಿನ 23ನೇ ವಾರ್ಷಿಕ ಮಾಹಾಸಭೆಗೆ ಆಗಮಿಸಿರುವ ಮಾನ್ಯ ಎಲ್ಲಾ
ಸದಸ್ಯರುಗಳಿಗೆ ವೈಯಕ್ತಿಕವಾಗಿ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಆತ್ಮೀಯ ಸ್ವಾಗತ.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದಿನಾಂಕ 07-12-2001 ರಂದು ನೋಂದಾವಣೆಯಾಗಿ ದಿನಾಂಕ 01-01-2002 ರಿಂದ ಕಾರ್ಯ ಪ್ರಾರಂಭಿಸಿ 23 ವರ್ಷಗಳಿಂದ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರ ಅಭಿವೃದ್ದಿಗಾಗಿ ಕೃಷಿ ಸಾಲ ನೀಡುತ್ತಾ ಬಂದಿದೆ. ಸಹಕಾರ ಸಂಘಗಳಿಗೆ ಮತ್ತು ಗ್ರಾಹಕರಿಗೆ ಕೃಷಿಯೇತರ ಸಾಲಗಳನ್ನು ನೀಡುತ್ತಾ ಜಿಲ್ಲೆಯ ರೈತರ ಮತ್ತು ಜನತೆಯ ಆರ್ಥಿಕ ಅಭಿವೃದ್ಧಿಗೆ ನೆರವನ್ನು ನೀಡುತ್ತಿರುವುದು ಸಂತೋಷದ ವಿಷಯ. ಇತ್ತಿಚಿಗೆ ಬ್ಯಾಂಕಿನ ಆಡಳಿತ ಮಂಡಲಿಗೆ ಚುನಾವಣೆ ನಡೆದು ನಮ್ಮನ್ನು ಬ್ಯಾಂಕಿನ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಬ್ಯಾಂಕಿನ ಅಭಿವೃದ್ದಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಮಾನ್ಯ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ದಿನಾಂಕ:07-02-2024 ರಿಂದ ನಾನು ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದು ತಮ್ಮೇಲ್ಲರ ಸಹಕಾರವನ್ನು ಕೋರುತ್ತೇನೆ.

2023-24ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು ರೂ.2.01 ಕೋಟಿಗಳ ಲಾಭವನ್ನು ಗಳಿಸಿರುತ್ತದೆ. 2023-24ನೇ ಸಾಲಿಗೆ ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದಲ್ಲಿ ಒಟ್ಟು 99402 ರೈತ ಸದ್ಯಸರುಗಳಿಗೆ ರೂ.795.42ಕೋಟಿಗಳ ಅಲ್ಪಾವಧಿ ಕೆಸಿಸಿ ಸಾಲ ಹಾಗೂ ಶೇ.3ರ ಬಡ್ಡಿ ದರದಲ್ಲಿ ಒಟ್ಟು 432 ರೈತ ಸದ್ಯಸರುಗಳಿಗೆ ರೂ.31.62ಕೋಟಿಗಳ ಮಧ್ಯಮಾವದಿ ಕೃಷಿ ಸಾಲ ನೀಡಲಾಗಿರುತ್ತದೆ.

ಪ್ರಸಕ್ತ 2024-25 ಸಾಲಿಗೆ 140000 ರೈತ ಸದಸ್ಯರುಗಳಿಗೆ ರೂ.875.00 ಕೋಟಿಗಳ ಅಲ್ಪಾವದಿ ಕೆಸಿಸಿ ಸಾಲ ಹಾಗು 475 ಸದಸ್ಯರುಗಳಿಗೆ ರೂ.42.೦೦ ಕೋಟಿಗಳ ಮಧ್ಯಮಾವದಿ ಕೃಷಿ ಸಾಲ ನೀಡಲು ಗುರಿ ಹಾಕಿ ಕೊಂಡಿರುತ್ತದೆ. ಜುಲೈ 2024ರ ಅಂತ್ಯಕ್ಕೆ ಬ್ಯಾಂಕು ರೂ96.33ಕೋಟಿಗಳ ಬಂಗಾರ ಆಭರಣ ಸಾಲವನ್ನು ನೀಡಿರುತ್ತದೆ. ಮುಂದಿನ ಸಾಲಿನಲ್ಲಿ ಬ್ಯಾಂಕಿನಿಂದ ರೈತ ಸದಸ್ಯರುಗಳಿಗೆ ಹಾಗೂ ಗ್ರಾಹಕರುಗಳಿಗೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ನೀಡಲು ಅನುಕೂಲವಾಗುವಂತೆ ಸದಸ್ಯ ಸಹಕಾರ ಸಂಘಗಳು ಸಂಪನ್ಮೂಲ ಸಂಗ್ರಹಿಸಲು ಸಹಕರಿಸುವಂತೆ ಮಾನ್ಯ ಸದಸ್ಯರುಗಳನ್ನು ಕೋರುತ್ತೇನೆ.

ಬ್ಯಾಂಕ್ ದಿನಾಂಕ 31-03-2024ಕ್ಕೆ ಒಟ್ಟಾರೆ 24 ಶಾಖೆಗಳನ್ನು ಹಾಗೂ ಕೇಂದ್ರ ಕಛೇರಿಯನ್ನು ಹೊಂದಿರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇನ್ನೂ 9 ಹೊಸ ಶಾಖೆಗಳನ್ನು ಪ್ರಾರಂಬಿಸಲು ನಬಾರ್ಡ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಇತ್ತೀಚಿನ ಆರ್‌ಬಿಐ ಹೊಸ ನಿಯಮಾವಳಿಯಂತೆ ಹೊಸ ಶಾಖೆಗಳನ್ನು ಪ್ರಾರಂಬಿಸುವುದಕ್ಕೆ ಆರ್‌ಬಿಐ ನಿಂದ ಅನುಮತಿ ಪಡೆಯಬೇಕಾಗಿರುತ್ತದೆ. ಅದರಂತೆ ಅನುಮತಿ ಬಂದ ನಂತರ ಹೊಸ ಶಾಖೆಗಳನ್ನು ಪ್ರಾರಂಬಿಸಲು ಕ್ರಮವಿಡಲಾಗುವುದು.

ಬ್ಯಾಂಕಿನ ಕೇಂದ್ರ ಕಛೇರಿಗೆ ನೂತನ ಕಟ್ಟಡ ನಿರ್ಮಾಣ ಮಾಡಲು ದಾವಣಗೆರೆ ತಾಲ್ಲೂಕ ಕಸಬಾ ಹೋಬಳಿ ಶಿರಮಗೊಂಡನಹಳ್ಳಿ ಗ್ರಾಮದ ಸರ್ವೆ ನಂ.57ರಲ್ಲಿ, ಪ್ರವಾಸ ಮಂದಿರ ಪಕ್ಕದ ಬೈಪಾಸ್ ರಸ್ತೆಯ ಹತ್ತಿರ ೨೦ ಗುಂಟೆ ಜಮೀನನ್ನು ನಮ್ಮ ಬ್ಯಾಂಕಿನ ಕೇಂದ್ರ ಕಛೇರಿ ಕಟ್ಟಡಕ್ಕಾಗಿ ಮಂಜೂರಾಗಿದ್ದು, ಇಲ್ಲಿ ಸುಸಜ್ಜಿತವಾದ ಒಂದು ಹೊಸ ಕಟ್ಟಡ ನಿರ್ಮಾಣ ಮಾಡಲು ಕಟ್ಟಡದ ಯೋಜನೆ ಮತ್ತು ಅಂದಾಜು ಪಟ್ಟಿ ತಯಾರಿಸಿದ್ದು, ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮತಿಯನ್ನು ನೀಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ತುರ್ತು ಕ್ರಮವಿಡಲಾಗುವುದು. ಜಿಲ್ಲೆಯ ರೈತ ಸದಸ್ಯರುಗಳು ಹಾಗೂ ಸಹಕಾರ ಸಂಘಗಳು ಬ್ಯಾಂಕಿನ ನೂತನ ಕಟ್ಟಡ ನಿರ್ಮಾಣ ಮಾಡಲು ದೇಣಿಗೆ ರೂಪದಲ್ಲಿ ಧನ ಸಹಾಯ ನೀಡಲು ತಮ್ಮನ್ನು ಈ ಮೂಲಕ ಕೋರುತ್ತೇನೆ.
ಜಿಲ್ಲೆಯ ಗ್ರಾಹಕರುಗಳಿಗೆ ತ್ವರಿತ ಹಾಗೂ ಸುಲಭ ಬ್ಯಾಂಕಿಂಗ್ ಸೌಕರ್ಯಗಳು ದೊರೆಯಲು ಅನುಕೂಲವಾಗುವ ದೃಷ್ಠಿಯಿಂದ ಬ್ಯಾಂಕಿನಿಂದ ಗ್ರಾಹಕರುಗಳಿಗೆ “ಮೋಬೈಲ್ ಆಪ್” ಸೇವೆಯನ್ನು ನೀಡಲಾಗಿರುತ್ತದೆ. ನಮ್ಮ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆ.ಸಿ.ಸಿ. ಸಾಲ ಪಡೆದ ರೈತರಿಗೆ “ರೂಪೇ ಕೆ.ಸಿ.ಸಿ. ಕಾರ್ಡ” ಮತ್ತು ಗ್ರಾಹಕರಿಗೆ “ಡೆಬಿಟ್ ಕಾರ್ಡ್”ಗಳನ್ನು ನೀಡಲಾಗುತ್ತಿದ್ದು, ತ್ವರಿತವಾಗಿ ಪಿನ್ ಪಡೆಯಲು ಶಾಖೆಗಳಲ್ಲಿ ಮೈಕ್ರೂ ಎ.ಟಿ.ಎಂ ಗಳನ್ನು ಅಳವಡಿಸಲಾಗುವುದು. ಈ ಮೂಲಕ ಗ್ರಿನ್ ಪಿನ್ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಬಯಸುತ್ತೇನೆ. ನೈಸರ್ಗಿಕ ವಿಕೋಪಗಳಿಂದ ರೈತ ಸದಸ್ಯರುಗಳಿಗೆ ಬೆಳೆ ಹಾನಿ ತಪ್ಪಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ(ವಿಮಾ) ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳನ್ನು ಜಾರಿಗೊಳಿಸಲಾಗಿರುತ್ತದೆ. ಭಾರತ ಸರ್ಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳಾದ PMSBY/ PMJJBY ಮತ್ತು APY ಯೋಜನೆಗಳನ್ನು ನಮ್ಮ ಬ್ಯಾಂಕಿನಲ್ಲಿಯೂ ಸಹ ಅನುಷ್ಠಾನಗೊಳಿಸಿರುವುದರಿಂದ ಗ್ರಾಹಕರುಗಳಿಗೆ ಸಹಕಾರಿಯಾಗಿರುತ್ತದೆ. ಈ ಯೋಜನೆಯಲ್ಲಿ ಇತ್ತೀಚಿನ ದಿನಾಂಕ 31-07-2024ರ ವರೆಗೆ 538 ಗ್ರಾಹಕರುಗಳನ್ನು PMJJBY ಯೋಜನೆಯಲ್ಲಿ ಹಾಗು 14431 ಗ್ರಾಹಕರುಗಳನ್ನು PMSBY ಯೋಜನೆಯಲ್ಲಿ ನೊಂದಾಯಿಸಲಾಗಿರುತ್ತದೆ. ಈವರೆವಿಗೂ 3 ಗ್ರಾಹಕರುಗಳಿಗಳಿಗೆ ಮರಣ ಪರಿಹಾರವಾಗಿ ರೂ.6.೦೦ ಲಕ್ಷಗಳ ಮೊತ್ತವು ವಿಮಾ ಕಂಪನಿಯಿಂದ ಗ್ರಾಹಕರುಗಳಿಗೆ ಸಂದಾಯವಾಗಿರುತ್ತದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಬಾರ್ಡ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ 182 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 176 ಸಹಕಾರ ಸಂಘಗಳಿಗೆ ವ್ಯವಹಾರವನ್ನು ಗಣಕೀಕರಣ ಮಾಡಲು ಕ್ರಮವಿಡಲಾಗಿದ್ದು ತ್ವರಿತವಾಗಿ ಉo ಐive ಮಾಡಲಾಗುತ್ತದೆ.
ನಮ್ಮ ಬ್ಯಾಂಕ್ ಈ ಸಾಲಿನಲ್ಲಿ ರೂ.1637.78 ಕೋಟಿಗಳ ಹೆಚ್ಚಿನ ಮೊತ್ತದ ವ್ಯವಹಾರ ಹೊಂದಿರುವುದನ್ನು ತಿಳಿಸಲು ಹರ್ಷಿಸುತ್ತೇನೆ. ಬ್ಯಾಂಕು ಆರ್‌ಬಿಐ ಮತ್ತು ನಬಾರ್ಡ ಇವರ ಪ್ರಮುಖ ಮಾನದಂಡಗಳನ್ನು ಪೂರೈಸಿದ್ದು, ಬ್ಯಾಂಕು ಪ್ರಸಕ್ತ ವರ್ಷದ ಲೆಕ್ಕ ಪರಿಶೋಧನೆಯಲ್ಲಿಯೂ ‘A’ ಶ್ರೇಣಿಯನ್ನು ಪಡೆದಿರುತ್ತದೆ ಎಂದು ಹೇಳುವುದಕ್ಕೆ ಹೆಮ್ಮೆ ಎನಿಸುತ್ತದೆ.

ಜಿಲ್ಲೆಯ ಎಲ್ಲಾ ರೈತ ಸದಸ್ಯರುಗಳು ಗ್ರಾಹಕರುಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಾಗೂ ಪ್ರಮುಖ ಸಕ್ಕರೆ ಕಾರ್ಖಾನೆಗಳಾದ ದಾವಣಗೆರೆ ಸಕ್ಕರೆ ಕಾರ್ಖಾನೆ ನಿ., ಕುಕ್ಕವಾಡ ಮತ್ತು ಶಾಮನೂರು ಸಕ್ಕರೆ ಕಾರ್ಖಾನೆ ನಿ., ದುಗ್ಗಾವತಿ ಇವರುಗಳು ನಮ್ಮ ಬ್ಯಾಂಕಿನೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದು, ಬ್ಯಾಂಕಿಗೆ ಹೆಚ್ಚಿನ ಪ್ರಮಾಣದ ವ್ಯವಹಾರವನ್ನು ನೀಡಿ ಸಹಕರಿಸಿದ್ದಕ್ಕೆ ಸಹಕಾರ ಸಂಘಗಳ ಪದಾಧಿಕಾರಿಗಳಿಗೂ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಎಲ್ಲಾ ಪದಾಧಿಕಾರಿಗಳಿಗೂ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಬ್ಯಾಂಕ್ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿ ಜಿಲ್ಲೆಯ ಜನತೆಗೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ.

ಜೈ ಸಹಕಾರ

ಜೈ ಹಿಂದ್
ಸಹಿ/-
ಅಧ್ಯಕ್ಷರು
(ಕೋಗುಂಡಿ ಬಕ್ಕೇಶಪ್ಪ)

ಅಧ್ಯಕ್ಷರು